ಹೂಗಾರ, ಎಚ್ ಎನ್
(1932- ). ವೃತ್ತಿರಂಗಭೂಮಿ ವಲಯದಲ್ಲಿ 'ಜ್ಯುಬಿಲಿ ಕವಿ ಎಂದೇ ಹೆಸರಾದವರು ಎಚ್ ಎನ್ ಹೂಗಾರ್.  ಪೂರ್ಣ ಹೆಸರು ಹುಚ್ಚಪ್ಪ ನಾಗಪ್ಪ ಹೂಗಾರ. ಹುಟ್ಟಿದ್ದು ಮಾರ್ಚ್ 30, 1932. ತಾಯಿ ಸಂಗಮ್ಮ. ಊರು ಗದುಗಿನ ಶಹಾಪೂರಪೇಟೆ. ಅಜ್ಜ ಕರಡಿಮಜಲು ಬಾರಿಸುವುದರಲ್ಲಿ ಶ್ರೇಷ್ಠ ಕಲಾವಿದನಾಗಿದ್ದ. ತಂದೆಯೂ ಕರಡಿಮಜಲು ಕಲಾವಿದರ ತಂಡ ಕಟ್ಟಿ ಕಲೆಯನ್ನು ಪ್ರದರ್ಶಿಸುತ್ತಿದ್ದ. ಇಂಥ ಕಲಾವಿದರ ಮನೆತನದಲ್ಲಿ ಹುಟ್ಟಿದ ಹುಚ್ಚಪ್ಪನಿಗೆ ಬಾಲ್ಯದಿಂದಲೇ ಕಲೆಯ ಸಂಸ್ಕಾರ ದೊರೆಯಿತು. ಎಂಟು ವರುಷದವನಿದ್ದಾಗಲೇ ಆಟ ಬಯಲಾಟಗಳಲ್ಲಿ ಪಾತ್ರ ಮಾಡಲು ಅವಕಾಶ ಸಿಕ್ಕಿತು. ಹನ್ನೆರಡನೆಯ ವಯಸ್ಸಿನಲ್ಲಿ ತಂದೆ ತೀರಿಕೊಳ್ಳಲು ಹುಚ್ಚಪ್ಪನೇ ಮನೆಯ ಕಾಯಕ. ಮನೆಮನೆಗೆ ಹೂಪತ್ರಿ  ಹಾಕುವುದನ್ನು ಮಾಡಬೇಕಾಯಿತು. 

ಹೂಪತ್ರಿ ಹಾಕಲು ಮನೆ ಮನೆಗೆ ಹೋದಾಗ ನೂರಾರು ಸಂಸಾರಗಳ ವಿಭಿನ್ನ ಸನ್ನಿವೇಶಗಳನ್ನು ನೋಡುವ ಅವಕಾಶ ಸಿಕ್ಕಿತು. ಇಂಥ ಸನ್ನಿವೇಶಗಳನ್ನೇ ಮುಂದಿಟ್ಟು ಸಣ್ಣ ಸಣ್ಣ ನಾಟಕ ಬರೆಯುವ ಪ್ರಯತ್ನ ವಿದ್ಯಾರ್ಥಿಯಾಗಿದ್ದಾಗಲೇ ನಡೆಯಿತು. ಶಾಲೆಯ ಕಾರ್ಯಕ್ರಮಗಳಲ್ಲಿ ಹುಚ್ಚಪ್ಪ, ಗೆಳೆಯರನ್ನು ಕೂಡಿಸಿಕೊಂಡು ಬರೆದ ನಾಟಕಗಳನ್ನು ಅಭಿನಯಿಸಿ ಗುರುಗಳಿಂದ ಸೈ ಎನಿಸಿಕೊಂಡ. ಹೀಗೆ ನಾಟಕಕಾರನ ಬದುಕಿಗೆ ಎಚ್. ಎನ್. ಹೂಗಾರ್ ನಾಂದಿ ಹಾಡಿದರು. 1950ರಲ್ಲಿ ಬಸವಣ್ಣನವರನ್ನು ಕುರಿತು ಭಕ್ತಿಜ್ಯೋತಿ ಎಂಬ ನಾಟಕ ಬರೆದು ನಲವಡಿ ಶ್ರೀಕಂಠಶಾಸ್ತ್ರಿಗಳಿಂದ ಭೇಷ್ ಎನಿಸಿಕೊಂಡರು.  ಈ ನಾಟಕ ನೋಡಿದ ಅಣ್ಣಿಗೇರಿಯ ಸಮಾಜ ವಿಕಾಸ ನಾಟ್ಯ ಸಂಘದವರು ತಮಗೂ ಒಂದು ಹೊಸ ನಾಟಕ ಬರೆದು ಕೊಡಲು ಕೇಳಿಕೊಂಡರು. ಪರಿಣಾಮ ದಸರಾ ಎಂಬ ಸುಂದರ ಸಾಮಾಜಿಕ ನಾಟಕ ರಚನೆಯಾಯಿತು. ಈ ನಾಟಕವನ್ನು ಮೆಚ್ಚಿಕೊಂಡ ಚಿತ್ತರಗಿ ಗಂಗಾಧರ ಶಾಸ್ತ್ರಿಗಳು ತಮ್ಮ ಕಂಪನಿಗಾಗಿಯೂ ಒಂದು ನಾಟಕ ಕೇಳಿದರು. ಹೂಗಾರರು ದೀಪಾವಳಿ ನಾಟಕ ಬರೆದು ಕೊಟ್ಟರು. ದಸರಾ, ದೀಪಾವಳಿ ನಾಟಕಗಳು ರಂಗದ ಮೇಲೆ ಯಶಸ್ವಿಯಾದವು ಹೂಗಾರರಿಗೆ ನಾಟಕಕಾರನ ಸ್ಥಾನ-ಮಾನ ತಂದುಕೊಟ್ಟವು. ಬೇರೆ ಬೇರೆ ಕಂಪನಿಯವರೂ ನಾಟಕಗಳಿಗಾಗಿ ಹೂಗಾರರಕಡೆಗೆ ಬಂದವು.

ಪಡೇಸೂರ ಕಂಪನಿ, ಬ್ಯಾಡಗಿ ಕಂಪನಿ, ಯಮನೂರ ಕಂಪನಿ, ವಿರೇಶ್ವರ ನಾಟ್ಯಸಂಘ ಗದಗ, ರವಿಕಲಾ ನಾಟ್ಯಸಂಘ, ಲಕ್ಷ್ಮೇಶ್ವರ , ಗುಡಿಗೇರಿ ಕಂಪನಿ, ಜಮಖಂಡಿ ಕಂಪನಿ, ಬೆಳವುಣಕಿ ಕಂಪನಿ- ಹೀಗೆ  ಹಲವಾರು ಕಂಪನಿಗಳಿಗಾಗಿ ಹೂಗಾರರು ನಾಟಕಗಳನ್ನು  ಬರೆದು ಕೊಟ್ಟಿದ್ದಾರೆ. ಗುಬ್ಬಿ ಕಂಪನಿಗಾಗಿ ಶ್ರೀ ಶರಣಬಸವೇಶ್ವರ, ಡಿ ಮುನಿರಂಗಪ್ಪನವರಿಗಾಗಿ ಡಬ್ಬಲ್ ತಾಳಿ, ಯೋಗಾನರಸಿಂಹ ಅವರಿಗಾಗಿ ಹುಚ್ಚರ ರಾಜ್ಯ, ಮೃಢದೇವ ಗವಾಯಿಗಳಿಗಾಗಿ ನಾದಯೋಗಿ ನಾಟಕಗಳನ್ನು ರಚಿಸಿದ್ದಾರೆ. ಕೊಂಡು ತಂದ ಗಂಡ, ತಂಗಿ ತಂದ ಅತ್ತಿಗೆ, ಹೆಣ್ಣು ಬಾಳಿನ ಕಣ್ಣು, ತಾಳ ತಪ್ಪಿದ ಬಾಳು, ಕೊರವಂಜಿ, ಸುವರ್ಣಾ, ಪುತ್ಥಳಿ, ಸುಳ್ಳು ದೇವರಿಗೆ ಕಳ್ಳ ಪೂಜಾರಿ- ಇವು ಹೂಗಾರರ ಇತರ ಜನಪ್ರಿಯ ನಾಟಕಗಳು. ಇವರು ಬರೆದ ಅರವತ್ತೊಂದು ನಾಟಕಗಳಲ್ಲಿ ಒಂದು ಐತಿಹಾಸಿಕ. ಒಂಬತ್ತು ಪೌರಾಣಿಕವಾದರೆ ಐವತ್ತೊಂದು ಸಾಮಾಜಿಕ ನಾಟಕಗಳಿವೆ. 

ಬಡತನ, ನಿರುದ್ಯೋಗ, ವೇಶ್ಯಾವೃತ್ತಿ ಮುಂತಾದ ಸಾಮಾಜಿಕ ಸಮಸ್ಯೆಗಳನ್ನೆತ್ತಿಕೊಂಡು ರಂಗಕೃತಿಗಳನ್ನು ರಚಿಸಿದ್ದಾರೆ. ಜನಸಾಮಾನ್ಯರಿಗಾಗಿ ನಾಟಕ ಬರೆಯುತ್ತಿದ್ದೇನೆ ಎಂಬ ಗಾಢ ಅರಿವಿನಿಂದಾಗಿ ಅವರ ರಚನೆಗಳು ಸರಳವಾಗಿ, ಸುಂದರವಾಗಿವೆ. ಆಡುಮಾತಿನಿಂದ, ಹಾಸ್ಯರಸದಿಂದ ಜನಪ್ರಿಯವಾಗಿವೆ. ನಾಟಕ ರಚನೆಯಂತೆ ನಟನೆಯಲ್ಲೂ ಇವರು ಕೌಶಲ್ಯ ಮೆರೆದಿದ್ದಾರೆ. ಒಂದೆರಡು ಸಲ ನಾಟಕ ಕಂಪನಿ ಕಟ್ಟಿ ಕೈಸುಟ್ಟುಕೊಂಡಿದ್ದಾರೆ. ನಾಟಕಕಾರರಾಗಿ ಮಾತ್ರ ಇವರು ಯಶಸ್ಸು ಪಡೆದಿದ್ದಾರೆ.

ಹೂಗಾರರು ಬರೆದ ಐದು ನಾಟಕಗಳು ಚಲನಚಿತ್ರಗಳಾಗಿವೆ. ಅವುಗಳಲ್ಲಿಯೂ ಅಭಿನಯಿಸಿದ ಹಿರಿಮೆ ಅವರದು. ತಾಳ ತಪ್ಪಿದ ಬಾಳು ನಾಟಕವು ಪಟ್ಟಣಕ್ಕೆ ಬಂದ ಪತ್ನಿಯರು ಹೆಸರಿನಿಂದ ಚಲನಚಿತ್ರವಾಯಿತು ಅದರಲ್ಲಿ  ಹೂಗಾರರು ಬ್ಯಾಂಕ್‍ಮ್ಯಾನೇಜರನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಗುಣ ನೋಡಿ ಹೆಣ್ಣು ಕೊಡು ಚಿತ್ರದಲ್ಲಿ ಹಾಸ್ಯನಟ, ಕಾರ್ಮಿಕ ಕಳ್ಳನಲ್ಲ ಚಿತ್ರದಲ್ಲಿ ಮಾರವಾಡಿ, ಗಾನಯೋಗಿ ಪಂಚಾಕ್ಷರಿ ಚಿತ್ರದಲ್ಲಿ ನಾಟಕ ಕಂಪನಿಯ ಮ್ಯಾನೇಜರ್ ಆಗಿ ಪಾತ್ರ ನಿರ್ವಹಿಸಿದ್ದಾರೆ.

ರಂಗಭೂಮಿ ಚಲನಚಿತ್ರ ಕ್ಷೇತ್ರಗಳಿಗೆ ಸಲ್ಲಿಸಿದ ಸೇವೆಗಾಗಿ ಹೂಗಾರರಿಗೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಬಂದಿವೆ. 1980ರಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಪಂ. ಪುಟ್ಟರಾಜ ಗವಾಯಿಗಳ ಪ್ರಶಸ್ತಿ, ರಾಜ್ಯದ ಪ್ರತಿಷ್ಠಿತ ಗುಬ್ಬಿ ವೀರಣ್ಣ ಪ್ರಶಸ್ತಿ (2000) ಹೂಗಾರರ ಸಾಧನೆಗೆ ಸಂದಿವೆ. ಶಿವರಾಮ ಕಾರಂತ, ಕುವೆಂಪು, ಅ.ನ.ಕೃ ಹೂಗಾರರ ಮೆಚ್ಚಿನ ನಾಟಕಗಳು.					
 (ರಾಮಕೃಷ್ಣ ಮರಾಠೆ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ